ಜಾಗೃತಿ ಟೈಮ್ಸ್ ಸುದ್ದಿ:
ಬೆಂಗಳೂರು:- ಅ. 15ರಿಂದ 19ರವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವಾರು ಜಿಲ್ಲೆಗಳಿಗೆ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಈ ಹಿಂದೆಯೇ ಎಚ್ಚರಿಸಿತ್ತು.
ಬೆಂಗಳೂರಿನ ಹಲವು ಭಾಗದ ಕೆ.ಆರ್.ಪುರ, ವರ್ತೂರು, ಮಾರತ್ತಹಳ್ಳಿ, ಹೊಸಕೋಟೆ, ಕೋರಮಂಗಲ, ಯಲಹಂಕ, ದೇವನಹಳ್ಳಿ, ಕೆಂಗೇರಿ, ಮಲ್ಲೇಶ್ವರಂ, ರಾಜಾಜಿನಗರ, ವಿಜಯನಗರ ಮುಂತಾದ ಕಡೆಗಳಲ್ಲಿ ಮಳೆ ಬಿದ್ದಿದೆ.
ಇನ್ನೂ ನಸುಗತ್ತಲು ಇದ್ದಾಗಲೇ ಶುರುವಾದ ಮಳೆಯಿಂದಾಗಿ ಬೆಳಗಿನ ಜಾವ ನಡೆಯುವ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಿದೆ.
ಬೆಳ್ಳಂಬೆಳಗ್ಗೆಯೇ ಜಡಿ ಮಳೆ ಹಿಡಿದಿದ್ದರಿಂದಾಗಿ ಹಾಲು ಮಾರಾಟ, ನ್ಯೂಸ್ ಪೇಪರ್ ವಿಲೇವಾರಿ, ತರಕಾರಿ ಸರಬರಾಜು ಇತ್ಯಾದಿ ಕೆಲಸಗಳಿಗೆ ಅಡಚಣೆಯಾಗಿದೆ. ಆದರೂ, ಆಯಾ ಕೆಲಸಗಾರರು ಕರ್ತವ್ಯ ಪಾಲನೆಗೆ ರಸ್ತೆಗೆ ಇಳಿದಿದ್ದಾರೆ.