ಚಾಮರಾಜನಗರ, ನವೆಂಬರ್ 06: ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿಯೊಂದಿದೆ. ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ನವೆಂಬರ್ 7ರ ಗುರುವಾರ ಉದ್ಯೋಗಕ್ಕಾಗಿ ನೇರ ಸಂದರ್ಶನ-2024 ಆಯೋಜನೆ ಮಾಡಲಾಗಿದೆ. ಪುರುಷರಿಗೆ 34, ಮಹಿಳೆಯರಿಗೆ 16 ಹುದ್ದೆಗಳಿವೆ. ಆಸಕ್ತರು, ಅರ್ಹರು ಅಗತ್ಯ ದಾಖಲೆಗಳ ಜೊತೆ ಉದ್ಯೋಗಕ್ಕಾಗಿ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಚಾಮರಾಜನಗರ ಉದ್ಯೋಗಕ್ಕಾಗಿ ನೇರ ಸಂದರ್ಶನ-2024 ಆಯೋಜನೆ ಮಾಡಿದೆ. ನವೆಂಬರ್ 7ರ ಗುರುವಾರ, ಬೆಳಗ್ಗೆ 10:30 ರಿಂದ 3:30ರ ತನಕ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ರೂಂ ನಂಬರ್ 210, ಎರಡನೇ ಮಹಡಿ, ಜಿಲ್ಲಾಡಳಿತ ಭವನ, ಚಾಮರಾಜನಗರ ಇಲ್ಲಿ ನೇರ ಸಂದರ್ಶನ ನಡೆಯಲಿದೆ.
ಭಾಗವಹಿಸುವ ಕಂಪನಿಗಳು: ಉದ್ಯೋಗಕ್ಕಾಗಿ ನೇರ ಸಂದರ್ಶನ-2024ರಲ್ಲಿ ರಾಜ್ ಬಯೋ ಆರ್ಗಾನಿಕ್ಸ್ ಹಾಗೂ ವಿ.ಎಲ್.ಕೆ ರಾಜ್ ಅಗ್ರಿ ವೆಂಚರ್ & ಡೆವಲಪರ್ಸ್ ಚಾಮರಾಜನಗರ ಪಾಲ್ಗೊಳ್ಳಲಿವೆ.
ಈ ನೇರ ಸಂದರ್ಶನದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಪುರುಷ ಅಭ್ಯರ್ಥಿಗಳಿಗೆ 24 ವರ್ಷ ಮೇಲ್ಪಟ್ಟು, ಮಹಿಳಾ ಅಭ್ಯರ್ಥಿಗಳಿಗೆ 21 ವರ್ಷ ಮೇಲ್ಪಟ್ಟು ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಪುರುಷರನ್ನು 34, ಮಹಿಳೆಯರನ್ನು 16 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ನೇರ ಸಂದರ್ಶನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ತಮ್ಮ ಸ್ವ-ವಿವರ ಮತ್ತು ಅಂಕಪಟ್ಟಿಗಳ ಮೂಲ ಹಾಗೂ ಜೆರಾಕ್ಸ್ ಪ್ರತಿಗಳೊಂದಿಗೆ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆ 08226 - 224430.