HSRP: ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ

Jagruthi Times Kannada
0

ಬೆಂಗಳೂರು, ನವೆಂಬರ್ 05: ಕರ್ನಾಟಕದ ಸಾರಿಗೆ ಇಲಾಖೆ ವಾಹನ ಸವಾರರಿಗೆ ತಾತ್ಕಾಲಿಕ ನೆಮ್ಮದಿ ನೀಡಿದೆ. ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಇದ್ದ ಗಡುವು ಮತ್ತೆ ವಿಸ್ತರಣೆ ಮಾಡಿದೆ. ಈಗಾಗಲೇ ಮೂರಕ್ಕೂ ಅಧಿಕ ಬಾರಿ ಗಡುವು ವಿಸ್ತರಣೆ ಮಾಡಲಾಗಿದ್ದು. ಸಾರಿಗೆ ಇಲಾಖೆ ಮಾಹಿತಿಯಂತೆ ಇನ್ನೂ 1.50 ಕೋಟಿ ವಾಹನಗಳು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕಿದೆ.

ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಇದ್ದ ಗಡುವು ವಿಸ್ತರಣೆ ಮಾಡುವ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪುಷ್ಪಾ ವಿ. ಎಸ್. ಸಾರಿಗೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶವನ್ನು ಹೊರಡಿಸಿದ್ದಾರೆ. ನವೆಂಬರ್ 30, 2024ರ ತನಕ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಹೊಸ ಗಡುವು ನೀಡಲಾಗಿದೆ.

ಸಾರಿಗೆ ಇಲಾಖೆ ಏಪ್ರಿಲ್ 1, 2019ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಆದೇಶವನ್ನು ಹೊರಡಿಸಿತ್ತು. ಬಳಿಕ ಮೂರಕ್ಕೂ ಅಧಿಕ ಬಾರಿ ಈ ಗಡುವು ವಿಸ್ತರಣೆ ಮಾಡಲಾಗಿದೆ. ಈಗ ಮತ್ತೊಮ್ಮೆ ವಾಹನ ಮಾಲೀಕರಿಗೆ ನವೆಂಬರ್ 30ರ ತನಕ ಗಡುವು ನೀಡಲಾಗಿದೆ

ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದ ವಾಹನಗಳಿಗೆ ಮೊದಲು ದಂಡ ವಿಧಿಸಲು ತೀರ್ಮಾನಿಸಲಾಗಿತ್ತು. ಆದರೆ ಕರ್ನಾಟಕ ಹೈಕೋರ್ಟ್ಗೆ ಸರ್ಕಾರ ದಂಡ ವಿಧಿಸುವುದಿಲ್ಲ ಎಂದು ಹೇಳಿದೆ. ಈಗ ವಾಹನದ ಮಾಲೀಕರಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ನವೆಂಬರ್ 30ರ ಬಳಿಕ ದಂಡವನ್ನು ವಿಧಿಸುವ ಕುರಿತು ಸಾರಿಗೆ ಇಲಾಖೆ ತೀರ್ಮಾನ ಕೈಗೊಳ್ಳಲಿದೆ.

ಕೋಟ್ಯಾಂತರ ವಾಹನ ಬಾಕಿ: ಏಪ್ರಿಲ್ 1, 2019ಕ್ಕೂ ಮೊದಲು ನೋಂದಣಿಯಾದ ಹಳೇ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು. ಹಲವು ಬಾರಿ ಸಾರಿಗೆ ಇಲಾಖೆ ಅಂತಿಮ ದಿನವನ್ನು ನಿಗದಿ ಮಾಡಿದರೂ ಸಹ ಇನ್ನೂ ಕೋಟ್ಯಾಂತರ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಬಾಕಿ ಇದೆ.

ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇದನ್ನು ಆಧರಿಸಿ ರಾಜ್ಯ ಸಾರಿಗೆ ಇಲಾಖೆ ಆದೇಶವನ್ನು ಹೊರಡಿಸಿತ್ತು. ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 2 ಕೋಟಿ ವಾಹನಗಳು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ. ಈವರೆಗೆ 50 ಲಕ್ಷ ವಾಹನಗಳು ಮಾತ್ರ ಅಳವಡಿಸಿಕೊಂಡಿದ್ದು, ಇನ್ನೂ 1.50 ಕೋಟಿ ವಾಹನಗಳಿಗೆ ಅಳವಡಿಕೆ ಮಾಡಬೇಕಿದೆ.

ಜನರು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಅದರಲ್ಲೂ ಇದಕ್ಕಾಗಿ ಆನ್ಲೈನ್ ಮೂಲಕ ಮಾತ್ರ ನೋಂದಣಿ ಮಾಡಬೇಕಿರುವುದರಿಂದ ಜನರು ಆ ಕಡೆ ಗಮನ ಹರಿಸುತ್ತಿಲ್ಲ, ಇದು ಸಾರಿಗೆ ಇಲಾಖೆ ತಲೆನೋವು ತಂದಿದೆ. ಆದ್ದರಿಂದ ಪದೇ ಪದೇ ಗಡುವು ವಿಸ್ತರಣೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕಿದೆ. ರಾಜ್ಯದಲ್ಲಿ ಹಲವು ಸರ್ಕಾರಿ ವಾಹನಗಳಿಗೂ ಸಹ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕಿರುವುದು ಬಾಕಿ ಇದೆ.

ಸಾರಿಗೆ ಇಲಾಖೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಬಗ್ಗೆ ಜನರಲ್ಲಿರುವ ಗೊಂದಲ ಬಗೆ ಹರಿಸಲು ಸಹಾಯವಾಣಿಯನ್ನು ಆರಂಭಿಸಿದೆ. ಜನರು 9449863429/ 26 ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದು ಎಂದು ಇಲಾಖೆ ಹೇಳಿದೆ.

ಅಲ್ಲದೇ ಹೆಚ್ಎಸ್ಆರ್ಪಿ ನೋಂದಣಿ ಹೆಸರಿನಲ್ಲಿ ಆನ್ಲೈನ್ನಲ್ಲಿ ಹಲವು ನಕಲಿ ಲಿಂಕ್ಗಳು ಲಭ್ಯವಿದೆ. ಬೇರೆ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳಬೇಡಿ ಎಂದು ಸಾರಿಗೆ ಇಲಾಖೆ ಜನರಿಗೆ ಎಚ್ಚರಿಕೆಯನ್ನೂ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!