ಮಂಡ್ಯ, ಜನವರಿ 07: ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ಆದ್ದರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಜನವರಿಯಲ್ಲಿಯೂ ಸಹ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 124 ಅಡಿ ಇದೆ. ಇದರಿಂದಾಗಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಅಲ್ಲದೇ ಕೃಷಿ ಚಟುವಟಿಕೆಗೆ ಸಹ ನೀರು ಸಿಗಲಿದೆ ಎಂದು ರೈತರು ಸಂತಸಗೊಂಡಿದ್ದಾರೆ.
ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಂಗಳವಾರ ಕೆಆರ್‌ಎಸ್‌ನಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಕೆಆರ್‌ಎಸ್ ಡ್ಯಾಂನಿಂದ ಕೃಷಿಗೆ ನೀರು ಹರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಎನ್. ಚಲುವರಾಯಸ್ವಾಮಿ, "ಕೆಆರ್‌ಎಸ್ ಡ್ಯಾಂನಿಂದ ಬೆಳೆಗಳಿಗೆ ಜನವರಿ 10 ರಿಂದ 18 ದಿನಗಳು ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗವುದು" ಎಂದು ಹೇಳಿದರು.
ಕೃಷಿಗೆ ನೀರು ಬಿಡುಗಡೆ ವೇಳಾಪಟ್ಟಿ: ಎನ್. ಚಲುವರಾಯಸ್ವಾಮಿ ಮಾತನಾಡಿ, "ಜನವರಿ 10 ರಿಂದ 18 ದಿನಗಳ ಕಾಲ ನೀರು ಹರಿಸಲಾಗುವುದು. 12 ದಿನಗಳ ಕಾಲ ನೀರು ನಿಲುಗಡೆ ಇದೇ ರೀತಿ ನಾಲ್ಕು ಬಾರಿ ನೀರು ನೀಡಲಾಗುವುದು" ಎಂದು ಹೇಳಿದರು.
"ಜಿಲ್ಲೆಯ ಮಳವಳ್ಳಿ ಹಾಗೂ ಮದ್ದೂರು ತಾಲೂಕಿನ ಕೊನೆಯ ಭಾಗಕ್ಕೂ ನೀರು ಹರಿಸಲಾಗುವುದು. ರೈತರು ಅಲ್ಪಾವಧಿ ಬೆಳೆಗಳ ನಾಟಿ ಕೆಲಸವನ್ನು ಪ್ರಾರಂಭಿಸಬೇಕು" ಎಂದು ಸಚಿವರು ತಿಳಿಸಿದರು.
"ಕೃಷಿ ಹಾಗೂ ನೀರಾವರಿ ಇಲಾಖೆ ಸಹಕಾರದೊಂದಿಗೆ ರೈತರು ಎರಡು ಬೆಳೆಗಳನ್ನು ಬೆಳೆಯಬೇಕು. ಇಲಾಖೆಗಳು ನೀಡುವ ಸಲಹೆ ಹಾಗೂ ಸೂಚನೆಗಳನ್ನು ರೈತರು ಪಾಲಿಸಿ, ಸಹಕಾರ ನೀಡಬೇಕು" ಎಂದರು.
ಎನ್. ಚಲುವರಾಯಸ್ವಾಮಿ ಮಾತನಾಡಿ, "ಇತಿಹಾಸದಲ್ಲಿ ಇದೇ ಮೊದಲು 92 ವರ್ಷಗಳ ನಂತರ 156 ದಿನಗಳ ಕಾಲ ಕೆಆರ್‌ಎಸ್ ಅಣೆಕಟ್ಟಿನಲ್ಲಿ 124.48 ಅಡಿ ನೀರು ನಿಂತಿದೆ. ಇದು ಟೀಕೆ ಟಿಪ್ಪಣಿ ಮಾಡುವವರಿಗೆ ಉತ್ತರ ನೀಡಿದೆ. ಜುಲೈನಿಂದ ಡಿಸೆಂಬರ್ ತನಕ ಬೆಳೆಗಳಿಗೆ ನಿರಂತರವಾಗಿ ನೀರು ನೀಡಲಾಗಿದೆ" ಎಂದು ಹೇಳಿದರು.
ಕೆಆರ್‌ಎಸ್ ಮಂಡ್ಯದ ರೈತರ ಜೀವನಾಡಿಯಾಗಿದೆ. 2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಡ್ಯಾಂ ಭರ್ತಿಯಾಗಿರಲಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುವುದು. ಮಂಡ್ಯ, ಮೈಸೂರು, ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕಾದ ಕಾರಣ ರೈತರ ಬೆಳೆಗಳಿಗೆ ಡ್ಯಾಂ ನೀರು ಪೂರೈಕೆ ಮಾಡಿರಲಿಲ್ಲ.
ಆದರೆ ಈ ಬಾರಿ ಡ್ಯಾಂ ಭರ್ತಿಯಾಗಿದ್ದು, ರೈತರು ಸಂತಸಗೊಂಡಿದ್ದರು. ಜನವರಿಯಲ್ಲಿಯೂ ಡ್ಯಾಂ ಸಂಪೂರ್ಣ ಭರ್ತಿ ಇರುವ ಕಾರಣ ರೈತರು ಕೃಷಿ ಚಟುವಟಿಕೆಯಲ್ಲಿ ಯಾವುದೇ ಆತಂಕವಿಲ್ಲದೇ ತೊಡಗಿದ್ದಾರೆ. ಬೆಂಗಳೂರು ನಗರಕ್ಕೆ ಸಹ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.